Asianet Suvarna News Asianet Suvarna News

ನನ್ನ ಮೊಮ್ಮಗಳ ಸಾವಿಗೆ ಸೂಕ್ತ ನ್ಯಾಯ ಕೊಡಿಸಿ: ಸಚಿವ ಡಾ. ಪರಮೇಶ್ವರ ಮುಂದೆ ಮೃತ ಅಂಜಲಿ ಅಜ್ಜಿ ಕಣ್ಣೀರು..!

ಅಂಜಲಿ ಅಜ್ಜಿ ಗೃಹ ಸಚಿವರ ಎದುರು ಕಣ್ಣೀರು ಹಾಕಿದರು. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯ ಮತ್ತೆ ಯಾರಿಗೂ ಆಗದಂತೆ ಸರ್ಕಾರ ಕ್ರಮಕೈಗೊಳ್ಳಲಿ. ಆರೋಪಿಗೆ ಆದಷ್ಟು ಬೇಗನೆ ಗಲ್ಲುಶಿಕ್ಷೆಗೆ ಗುರಿಪಡಿಸುವಂತೆ ಗೃಹಸಚಿವರ ಬಳಿ ಮನವಿ ಮಾಡಿದರು.

Give Proper Justice for My Granddaughter's Death Says Deceased Anjali's Grandmother grg
Author
First Published May 21, 2024, 12:29 PM IST

ಹುಬ್ಬಳ್ಳಿ(ಮೇ.21):  "ಅಲ್ಲಿ, ಇಲ್ಲಿ ಕೆಲ್ಸಾ ಮಾಡ್ಕೋಂತಾ ನಾವು ಜೀವನಾ ಸಾಗಿಸ್ತಾ ಇದ್ವಿ. ಇಂಥಾದ್ರಾಗ ಮನಿಗೆ ಬಂದು ನನ್ನ ಮೊಮ್ಮಗಳನ್ನಾ ಕೊಲೆ ಮಾಡಿ ಹೋಗ್ತಾನಂದ್ರ ಹ್ಯಾಂಗ್ರಿ. ಅಂಜಲಿನ ಕೊಲೆ ಮಾಡಿದವ್ನ ಹ್ಯಾಂಗರ ಮಾಡಿ ಗಲ್ಲಿಗೆ ಹಾಕಿಸ್ರಿ ಅಷ್ಟ ಸಾಕು ನಂಗ!" ಇದು ಸೋಮವಾರ ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಎದುರು ಈಚೆಗೆ ಹತ್ಯೆಗೀಡಾಗಿದ್ದ ಅಂಜಲಿ ಅಂಬಿಗೇರ ಅವರ ಅಜ್ಜಿ ಗಂಗಮ್ಮ ಕಣ್ಣೀರು ಹಾಕುತ್ತಾ ಹೇಳಿದ ಮಾತುಗಳಿವು.

ಮೇ 15ರಂದು ಗಿರೀಶ ಸಾವಂತ್‌ ಬೆಳ್ಳಂಬೆಳಗ್ಗೆ ಅಂಜಲಿಯ ಮನೆಗೆ ನುಗ್ಗಿ ಹತ್ಯೆಮಾಡಿ ಪರಾರಿಯಾಗಿದ್ದನು. ಈ ಘಟನೆ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಅಧಿಕಾರಿಗಳ ತಲೆದಂಡವೂ ಆಗಿತ್ತು. ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಹತ್ಯೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಅಂಜಲಿ ಅಜ್ಜಿ ಗೃಹ ಸಚಿವರ ಎದುರು ಕಣ್ಣೀರು ಹಾಕಿದರು. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯ ಮತ್ತೆ ಯಾರಿಗೂ ಆಗದಂತೆ ಸರ್ಕಾರ ಕ್ರಮಕೈಗೊಳ್ಳಲಿ. ಆರೋಪಿಗೆ ಆದಷ್ಟು ಬೇಗನೆ ಗಲ್ಲುಶಿಕ್ಷೆಗೆ ಗುರಿಪಡಿಸುವಂತೆ ಗೃಹಸಚಿವರ ಬಳಿ ಮನವಿ ಮಾಡಿದರು.

ಹುಬ್ಬಳ್ಳಿ: ಅಂಜಲಿ ಹಂತಕನ ವಿರುದ್ಧ ಮತ್ತೊಂದು ಕೇಸ್‌ ದಾಖಲು

ನಂತರ ಮಾತನಾಡಿದ ಗೃಹಸಚಿವರು, ನಿಮಗೆ ಆಗಿರುವ ಅನ್ಯಾಯದ ಕುರಿತು ಈಗಾಗಲೆ ನಾನು ಮಾಹಿತಿ ಪಡೆದುಕೊಂಡಿದ್ದು, ಆದಷ್ಟು ಬೇಗನೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ಕುಟುಂಬಕ್ಕೆ ಬೇಕಾಗುವ ನೆರವಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ನಿಮ್ಮ ಕುಟುಂಬದೊಂದಿಗೆ ನಾವೆಲ್ಲರೂ ಇದ್ದು, ಧೈರ್ಯವಾಗಿರಿ ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಮರೆತ ಕಾಂಗ್ರೆಸ್‌..!

ಮೊಮ್ಮಗಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯಿದೆ: ಗಂಗಮ್ಮ

ನನ್ನ ಮೊಮ್ಮಗಳು ಅಂಜಲಿ ಹತ್ಯೆಗೆ ಕಾರಣರಾಗಿರುವ ಆರೋಪಿಗೆ ರಾಜ್ಯ ಸರ್ಕಾರ ಶಿಕ್ಷೆ ನೀಡಿ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಅಂಜಲಿ ಅಜ್ಜಿ ಗಂಗಮ್ಮ ಅಂಬಿಗೇರ ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ‌ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹತ್ಯೆ ನಡೆದ ದಿನ ಏನೇನು ಆಯಿತು ಎಂದು ಕೇಳಿದರು. ಅದರ ಬಗ್ಗೆ ನಾವು ಹೇಳಿಕೆ ನೀಡಿದ್ದೇವೆ. ನಾವು ನಮ್ಮ ಮೊಮ್ಮಗಳ‌ನ್ನು ಕೊಂದ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಲು ಮನವಿ ಮಾಡಿದ್ದೇವೆ. ಅದರ ಕುರಿತಾಗಿ ಅವರು ತನಿಖೆ ಮಾಡಿ ತಕ್ಕ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮನೆ, ಶಿಕ್ಷಣದ ಜವಾಬ್ದಾರಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದಾರೆ. ಸಚಿವರು ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದರು.

Latest Videos
Follow Us:
Download App:
  • android
  • ios